ಟೈಮ್ಸ್, ದಿ
 ಅತ್ಯಧಿಕ ಪ್ರಸಾರವುಳ್ಳ ಒಂದು ಬ್ರಿಟಿಷ್ ಪತ್ರಿಕೆ; ಬ್ರಿಟನ್ನಿನಲ್ಲಿ ಸಾರ್ವಜನಿಕ ಅಭಿಪ್ರಾಯದ ಅದ್ವಿತೀಯ ವಕ್ತøವೆನಿಸಿರುವ ಹಳೆಯ ಪತ್ರಿಕೆ. ಬ್ರಿಟಿಷ್ ಪತ್ರಿಕಾ ಸಾಮ್ರಾಜ್ಯದಲ್ಲಿ ಈ ಪತ್ರಿಕೆಯ ಸ್ಥಾನ ಅತ್ಯಂತ ಗೌರವಯುತವಾದದ್ದು.

	ಟೈಮ್ಸ್ ಪತ್ರಿಕೆಯ ಸ್ಥಾಪನೆ ಒಂದು ಆಕಸ್ಮಿಕ. ಇದರ ಸ್ಥಾಪಕನಾದ ಜಾನ್ ವಾಲ್ಟರ್ (1739-1812) ಬ್ರಿಟನ್ನಿನ ಪ್ರಮುಖ ಕಲ್ಲಿದ್ದಿಲು ವ್ಯಾಪಾರಿಯಾಗಿದ್ದ (1755-1781). ಹಡಗು ವ್ಯಾಪಾರದಲ್ಲಿ ನಷ್ಟವಾಗಿ ದಿವಾಳಿಯಾದ (1782). ಪದಮುದ್ರಕಗಳಿಂದ (ಲೋಗೋಗ್ರಾಫ್) ಮುದ್ರಿಸುವ ಏಕಸ್ವ ಪಡೆದು (1782) ಈ ಹೊಸ ವಿಧಾನದಿಂದ ಪುಸ್ತಕಗಳ ಮುದ್ರಣವನ್ನಾರಂಭಿಸಿದ. ಈತ 1785ರ ಜನವರಿ 1ರಂದು ಈ ಪತ್ರಿಕೆಯನ್ನು ಆರಂಭಿಸಿದ. ಮೊದಲು ಇದಕ್ಕೆ ದಿ ಡೇಲಿ ಯೂನಿವರ್ಸಲ್ ರಿಜಿಸ್ಟರ್ ಎಂಬ ಹೆಸರಿತ್ತು. 1788 ರಲ್ಲಿ ದಿ ಟೈಮ್ಸ್ ಎಂದು ಪುನರ್ನಾಮಕರಣವಾಯಿತು. ಎರಡೂ ಹೆಸರುಗಳನ್ನು ತಳೆದು (ದಿ ಟೈಮ್ಸ್ ಆರ್ ದಿ ಯೂನಿವರ್ಸಲ್ ರಿಜಿಸ್ಟರ್) ಪ್ರಕಟವಾಗತೊಡಗಿದ ಪತ್ರಿಕೆ ಮೂರು ತಿಂಗಳುಗಳು ಅನಂತರ ದಿ ಟೈಮ್ಸ್ ಎಂಬ ಹೆಸರು ಮಾತ್ರ ಉಳಿದುಕೊಂಡಿತು. ಆರಂಭದಲ್ಲಿ ಪತ್ರಿಕೆಯ ಬೆಲೆ ಎರಡೂವರೆ ಪೆನ್ನಿ. ಇದು ಇತರ ಪತ್ರಿಕೆಗಳ ಬೆಲೆಗಳಿಗಿಂತ ಕಡಿಮೆಯಿತ್ತು. ಆದರೆ ಆದಾಯ ಮತ್ತು ಖರ್ಚುಗಳನ್ನು ತೂಗಿಸಲು ಮೂರು ತಿಂಗಳುಗಳಲ್ಲಿ ಇದರ ಬೆಲೆಯನ್ನು ಮೂರು ಪೆನ್ನಿಗಳಿಗೆ ಏರಿಸಲಾಯಿತು. ಸರ್ಕಾರದಿಂದ ಪತ್ರಿಕೆಗೆ ಸಹಾಯಧನ ದೊರೆಯುತ್ತಿದ್ದರೂ ಜಾನ್ ವಾಲ್ಟರ್ ಆದಷ್ಟು ನಿಷ್ಪಕ್ಷಪಾತವಾಗಿರಲು ಯತ್ನಿಸಿದ. ದಿ ಟೈಮ್ಸ್ ಹಲವು ಬಾರಿ ಮಾನನಷ್ಟ ಮೊಕದ್ದಮೆಗಳಿಗೆ ಈಡಾಯಿತು. ತನ್ನ ಟೀಕೆಗಳಿಂದಾಗಿ ವಾಲ್ಟರ್ ಆಗಿಂದಾಗ್ಗೆ ಜೈಲಿಗೆ ಹೋಗಬೇಕಾಯಿತು.

	ಫ್ರೆಂಚ್ ಕ್ರಾಂತಿಯ ವರದಿಯ ಪ್ರಕಟಣೆ ದಿ ಟೈಮ್ಸ್ ಪತ್ರಿಕೆಗೆ ಮಹೋನ್ನತ ಕೀರ್ತಿಯನ್ನು ತಂದುಕೊಟ್ಟಿತು. ಫ್ರಾನ್ಸಿನ ಚಕ್ರವರ್ತಿ ಹದಿನಾರನೆಯ ಲೂಯಿ ಮತ್ತು ಚಕ್ರವರ್ತಿನಿ ಮೇರಿ ಅಂಟಾಯಿನೆಟರ ವಧೆಯ ಸುದ್ದಿಯನ್ನು ಪತ್ರಿಕೆ ವರ್ಣರಂಜಿತವಾಗಿ ಪ್ರಕಟಿಸಿತು. ಪತ್ರಿಕೆಯ ಪ್ರಸಾರ ಹೆಚ್ಚತೊಡಗಿತು.

	ಜಾನ್ ವಾಲ್ಟರನ ಎರಡನೆಯ ಮಗ ಜಾನ್ (1776-1847)	1803ರಲ್ಲಿ ಟೈಮ್ಸ್‍ನ ವ್ಯವಸ್ಥಾಪಕನಾದ. 1803-10ರಲ್ಲಿ ಇದರ ಏಕೈಕ ಸಂಪಾದಕನಾಗಿದ್ದ. 1817-1841ರಲ್ಲಿ ಟೈಮ್ಸ್ ಸಂಪಾದಕನಾಗಿದ್ದವನು ತಾಮಸ್ ಬಾನ್ರ್ಸ್ (1785-1841). ಜಾನನ ಮಗ ಜಾನ್ (1818-1894) 1847ರಲ್ಲಿ ಟೈಮ್ಸ್‍ನ ಏಕೈಕ ವ್ಯವಸ್ಥಾಪಕನಾದ. ಇವರ ನೇತೃತ್ವದಲ್ಲಿ ಪತ್ರಿಕೆ ಹೊಸ ಮಜಲುಗಳನ್ನು ಕಂಡಿತು. 1814ರಲ್ಲಿ ಉಗಿಮುದ್ರಣ ಯಂತ್ರ ಸ್ಥಾಪಿತವಾಯಿತು. ಸರ್ಕಾರದೊಂದಿಗೆ ಪತ್ರಿಕೆಯ ಘರ್ಷಣೆ ಸಾಮಾನ್ಯವಾಯಿತು. ಇದರಿಂದಾಗಿ ಪತ್ರಿಕೆ ಸರ್ಕಾರಿ ಜಾಹೀರಾತುಗಳ, ಸುಂಕದ ಮನೆಯ ಪತ್ರಗಳ ಪ್ರಕಟನೆಗಳನ್ನು ಕಳೆದುಕೊಂಡಿತು. ವಿಶೇಷ ವಿದೇಶಿ ಬಾತ್ಮಿದಾರರನ್ನು ಪತ್ರಿಕೆ ನೇಮಕಮಾಡಿಕೊಳ್ಳತೊಡಗಿತು 1805ರಲ್ಲಿ. 1869ರಲ್ಲಿ ವಾಲ್ಟರ್ ಮುದ್ರಣಯಂತ್ರವನ್ನು ಸ್ಥಾಪಿಸಲಾಯಿತು. ಆಧುನಿಕ ಪತ್ರಿಕಾ ಮುದ್ರಣಾಲಯವನ್ನು ಸ್ಥಾಪಿಸಿದ ಮೊದಲ ಪತ್ರಿಕೆ ಇದು. ಜಾನನ ಮಗ ಆರ್ತರ್ ಫ್ರೇಸರ್ (1846-1910) 1894ರಿಂದ 1908ರ ವರೆಗೆ ಪತ್ರಿಕೆಯ ಪ್ರಧಾನ ಮಾಲೀಕನಾಗಿದ್ದ. ಆ ವರ್ಷ ಇದರ ಒಡೆತನ ಲಾರ್ಡ್ ನಾರ್ತ್‍ಕ್ಲಿಫ್ ಕೈಗೆ ಹೋಯಿತು. ತನ್ನ ಅಭಿಪ್ರಾಯಗಳ ಪ್ರತಿಪಾದನೆಗಾಗಿ ಆತ ಪತ್ರಿಕೆಯನ್ನು ಪರಿಣಾಮಕಾರಿಯಾಗಿ ಬಳಸಿದ. ನಾರ್ತ್‍ಕ್ಲಿಫ್‍ನ ಮರಣಾನಂತರ ಒಡೆತನ ಜೆ.ಜೆ. ಆಸ್ಟರ್ ವಶಕ್ಕೆ ಹೋಯಿತು. 1908-1910ರಲ್ಲಿ ಫ್ರೇಸರನೂ ಅನಂತರ 1923ರ ವರೆಗೆ ಆತನ ಮಗ ಜಾನನೂ ಪತ್ರಿಕಾ ಸಂಸ್ಥೆಯ ನಿರ್ದೇಶಕ ಮಂಡಲಿಯ ಅಧ್ಯಕ್ಷರಾಗಿದ್ದರು. ಎರಡನೆಯ ಮಹಾಯುದ್ಧದ ಕಾಲದಲ್ಲಿ ಪತ್ರಿಕೆಯ ಕಟ್ಟಡವೂ ಮುದ್ರಣಾಲಯವೂ ಬಾಂಬ್ ದಾಳಿಯಿಂದ ತೀವ್ರ ಹಾನಿಗೆ ಒಳಗಾಗಿದ್ದವು. 1981ರಲ್ಲಿ ದಿ ಟೈಮ್ಸ್ ಪತ್ರಿಕೆ ಆಸ್ಟ್ರೇಲಿಯಾದ ಪತ್ರಿಕಾ ಸಾರ್ವಭೌಮ ರೂಪರ್ಲ್ ಮುರುಡೋಚ್‍ನ ಸಾಮ್ರಾಜ್ಯದ ಒಂಅಂಗವಾಯಿತು.				
(ಕೆ.ವಿ.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ